ರಾಣೆಬೆನ್ನೂರು
ಭಾರತದ ಕರ್ನಾಟಕ ರಾಜ್ಯದ ಹಾವೇರಿ ಜಿಲ್ಲೆಯ ಒಂದು ತಾಲ್ಲೂಕು ಮತ್ತು ಅದರ ಆಡಳಿತ ಕೇಂದ್ರ.  ಈ ತಾಲ್ಲೂಕಿನ ಉತ್ತರದಲ್ಲಿ ಹಾವೇರಿ, ಪಶ್ಚಿಮ ಮತ್ತು ದಕ್ಷಿಣಕ್ಕೆ  ಬ್ಯಾಡಗಿ ಮತ್ತು ಹಿರೇಕೆರೂರು ತಾಲ್ಲೂಕುಗಳೂ ಈಶಾನ್ಯ ಮತ್ತು ಪೂರ್ವದಲ್ಲಿ ಬಳ್ಳಾರಿ  ಜಿಲ್ಲೆಯ ಹರಿಹರ ಹರಪನಹಳ್ಳೀ ತಾಲ್ಲೂಕುಗಳೂ ಆಗ್ನೇಯದಲ್ಲಿ ಚಿತ್ರದುರ್ಗ ಜಿಲ್ಲೆಯ ಹರಿಹರ ತಾಲ್ಲೂಕು ಇವೆ.  ಈ ತಾಲ್ಲೂಕಿನಲ್ಲಿ ಕುಪ್ಪೇಲೂರು, ರಾಣೆಬೆನ್ನೂರು ಮತ್ತು ಮೆಡ್ಲೇರಿ ಈ ಹೋಬಳಿಗಳೂ 103 ಗ್ರಾಮಗಳೂ ಇವೆ.  ತಾಲ್ಲೂಕಿನ ವಿಸ್ತೀರ್ಣದ 904 ಚ.ಕಿ.ಮೀ. ಈ ತಾಲ್ಲೂಕಿನ ಜನಸಂಖ್ಯೆ 3,04,625 (2001). ಪಟ್ಟಣದ ಜನಸಂಖ್ಯೆ 89,594 (2001). 
ಈ ತಾಲ್ಲೂಕಿನ ಹೆಚ್ಚು ಭಾಗ ಮಲೆನಾಡ ಸೆರಗಿನ ಪ್ರದೇಶ.  ತುಂಗಭದ್ರಾನದಿ ಈ ತಾಲ್ಲೂಕಿನಲ್ಲಿ ಬಲಪಾಶ್ರ್ವದ ಗಡಿಯಾಗಿ ಹರಿಯುತ್ತದೆ.  ಅದು ಮೊದಲು ದಕ್ಷಿಣ ಅಂಚಿನಲ್ಲಿ ತುಮ್ಮಿನಕಟ್ಟೆ ಗ್ರಾಮದ ಬಳಿ ತಾಲ್ಲೂಕಿನ ಸಂಪರ್ಕಹೊಂದಿ  ಹರಿಹರ, ಹರಪನಹಳ್ಳಿ, ಹಡಗಲಿ ತಾಲ್ಲೂಕುಗಳನ್ನು ರಾಣೆಬೆನ್ನೂರು ತಾಲ್ಲೂಕಿನಿಂದ ಬೇರ್ಪಡಿಸುವ ಗಡಿಯಾಗಿ ಹರಿದು ಉತ್ತರದಲ್ಲಿ ಚೌಡದಾನಪುರದ ಬಳಿ ಹಾಬೇ ತಾಲ್ಲೂಕಿನ ಗಡಿ ಮುಟ್ಟುತ್ತದೆ.   ಕುಮುದ್ವತಿ ನದಿ ತಾಲ್ಲೂಕಿನ ದಕ್ಷಿಣ ಭಾಗದಲ್ಲಿ ಸ್ವಲ್ಪ ದೂರ ಪೂರ್ವಾಭಿಮುಖವಾಗಿ ಹರಿದು ತುಂಗಭದ್ರಾ ನದಿಯನ್ನು ಮುದೇನೂರಿನ ಬಳಿ ಸೇರಿಕೊಳ್ಳುತ್ತದೆ.  ರಾಣಿಬೆನ್ನೂರಿನ  ಪಶ್ಚಿಮಕ್ಕಿರುವ ಅಸುಂಡಿ ಕೆರೆ ಮತ್ತು ಪೂರ್ವಕ್ಕಿರುವ ಮೆಡ್ಲೇರಿ ಕೆರೆಗಳು ಈ ತಾಲ್ಲೂಕಿನ ವ್ಯವಸಾಯಕ್ಕೆ ಬಲು ಸಹಾಯಕವಾಗಿವೆ.  ವಾರ್ಷಿಕ ಸರಾಸರಿ ಮಳೆ 632 ಮಿ.ಮೀ.  ತಾಲ್ಲೂಕಿನಲ್ಲಿ ಸುಮಾರು 125 ಕಿ.ಮೀ.  ಮೀಸಲು ಅರಣ್ಯ ಪ್ರದೇಶ ಮತ್ತು ಸುಮಾರು 55 ಚಕಿಮೀ.  ಹುಲ್ಲುಗಾವಲಿನ ಅರಣ್ಯಪ್ರದೇಶ ಇವೆ.  ಈ ತಾಲ್ಲೂಕಿನ ಅರಣ್ಯಗಳಲ್ಲಿ ಬೆಲೆಬಾಳುವ ಇತರ ಉಪಯುಕ್ತ ಮರಗಳೊಡನೆ ಗಂಧದ ಮರವೂ ಹೆಚ್ಚು ಬೆಳೆಯುತ್ತದೆ.  ಕಪ್ಪು ಮತ್ತು ಕೆಂಪು ಮಸಾರಿ ಮಣ್ಣಿನ ಫಲವತ್ತಾದ ಭೂಮಿಯಿದ್ದು ತಾಲ್ಲೂಕಿನಲ್ಲಿ ಜೋಳ, ಗೋದಿ, ಬತ್ತ, ರಾಗಿ, ಸೇಂಗಾ, ಹತ್ತಿ, ದ್ವಿದಳ ಧಾನ್ಯಗಳು ಜೊತೆಗೆ ವಿವಿಧ ತರಕಾರಿಗಳು ಮತ್ತು ಫಲಗಳು ಬೆಳೆಯುತ್ತವೆ.
ತುಂಗಾಭದ್ರಾ ಮತ್ತು ಕುಮುದ್ವತಿ ನದಿಗಳು ತಾಲ್ಲೂಕಿನ ವ್ಯವಸಾಯಕ್ಕೆ ನೀರನ್ನೊದಗಿಸುತ್ತವೆ.  ಈ ನದಿಗಳಿಂದ ಮತ್ಸೋದ್ಯಮವೂ ತಕ್ಕಮಟ್ಟಿಗೆ ನಡೆಯುತ್ತದೆ.  ಪಶುಪಾಲನೆ ವ್ಯವಸಾಯದಂಥ ಒಂದು ಉಪಪ್ರಧಾನ ಕಸುಬಾಗಿದೆ.  ತಾಲ್ಲೂಕು ಮತು ಗ್ರಾಮಮಟ್ಟಗಳಲ್ಲಿ ಪಶುವೈದ್ಯಾಲಯಗಳಿವೆ.  ಈ ತಾಲ್ಲೂಕಿನಲ್ಲಿ ಅಂಚೆ, ತಂತಿ, ವಿದ್ಯುತ್ತು ಮತ್ತ ದೂರವಾಣಿ ಸೌಲಭ್ಯಗಳಿವೆ.  ಸಾರ್ವಜನಿಕ ಆಸ್ಪತ್ರೆ ಇದೆ.
ಬೆಂಗಳೂರು - ಬೆಳಗಾವಿ ಹೆದ್ದಾರಿ ಹಾಗೂ ರೈಲುಹಾದಿ ಈ ತಾಲ್ಲೂಕಿನ ಮೂಲಕ ಆಗ್ನೇಯ - ವಾಯುವ್ಯಾಭಿಮುಖವಾಗಿ ಹಾದುಹೋಗುತ್ತದೆ.  ರಾಣಿಬೆನ್ನೂರಿನಿಂದ ಗುತ್ತಲ, ಬ್ಯಾಡಗಿ, ಕೋಡ, ಮಾಸೂರು ಹೊನ್ನಾಳಿಗಳಿಗೆ ಹೋಗುವ ಮಾರ್ಗಗಳ ತಾಲ್ಲೂಕಿನ ಇತರ ಮುಖ್ಯ ರಸ್ತೆಗಳು.
ಈ ತಾಲ್ಲೂಕಿನ ಕೆಲವು ಮುಖ್ಯ ಸ್ಥಳಗಳಲ್ಲಿ ಐರಣಿ ರಾಣೆಬೆನ್ನೂರಿನ ಪೂರ್ವಕ್ಕೆ ಸುಮಾರು ದೂರದಲ್ಲಿ ತುಂಗಭದ್ರಾನದಿಯ ಎಡದಂಡೆಯ ಮೇಲಿದೆ.  ಇಲ್ಲೊಂದು ಹಳೆಯ ಕೋಟೆ ಇದೆ.  ರಾಣೆಬೆನ್ನೂರಿನ ಉತ್ತರಕ್ಕೆ ಚೌಡದಾನಪುರ ಇದೆ.  ಇಲ್ಲಿ ಮುಕ್ತೇಶ್ವರ ದೇವಾಲಯವಿದೆ.  ರಾಣಿಬೆನ್ನೂರಿಗೆ ಉತ್ತರದಲ್ಲಿ ಸುಮಾರು 13 ಕಿ.ಮೀ ದೂರದಲ್ಲಿರುವ ಗುಡ್ಡಗುಡ್ಡಾಪುರದಲ್ಲಿ (ದೇವರಗುಡ್ಡ) ಮಲ್ಲಾರಿ ದೇವಾಲಯವಿದೆ.  ಇಲ್ಲಿ ವರ್ಷಕ್ಕೊಮ್ಮೆ ಜಾತ್ರೆ ಸೇರುವುದು.  ರಾಣೆಬೆನ್ನೂರಿನ ವಾಯುವ್ಯದಲ್ಲಿ ಸುಮಾರು 5 ಕಿ.ಮೀ ದೂರದಲ್ಲಿರುವ ಹುಲಿಹಳ್ಳಿಯಲ್ಲಿ ಹಳೆಯ ಕೋಟೆ, ರಾಮೇಶ್ವರ ದೇವಾಲಯ ಇವೆ. ರಾಣೆಬೆನ್ನೂರಿನ ಈಶಾನ್ಯಕ್ಕೆ ಸುಮಾರು 15 ಕಿಮೀ ದೂರದಲ್ಲಿ ತುಂಗಭದ್ರಾ  ಎಡದಂಡೆಯ ಮೇಲೆ ಇರುವ ಮೆಡ್ಲೇರಿ ಹೋಬಳಿ ಕೇಂದ್ರ.  ಇಲ್ಲಿ ತಯಾರಾಗುವ ಕಂಬಳಿಗಳು ಪ್ರಸಿದ್ಧ.  ಮೆಡ್ಲೇರಿಯಲಿರುವ ಕೆರೆಗೆ 670.25 ಮೀಟರ್ ಉದ್ದ 12.80 ಮೀಟರ್ ಎತ್ತರದ ಅಣೆಕಟ್ಟಿದೆ.
ರಾಣೆಬೆನ್ನೂರು ಈ ತಾಲ್ಲೂಕಿನ ಆಡಳಿತ ಕೇಂದ್ರ ಹಾಗೂ ಮುಖ್ಯ ಪಟ್ಟಣ.  ಧಾರವಾಡದಿಂದ ಆಗ್ನೇಯಕ್ಕೆ 125 ಕಿಮೀ ದೂರದಲ್ಲಿವೆ.  ಪುಣೆ - ಬೆಂಗಳೂರು ರೈಲುಮಾರ್ಗ ಹಾಗೂ ರಾಷ್ಟ್ರೀಯ ಹೆದ್ದಾರಿ ಈ ಪಟ್ಟಣದ ಮೂಲಕ ಹಾದುಹೋಗಿವೆ.  ಈ ಪಟ್ಟಣ ಪುರಸಭಾಡಳಿತಕ್ಕೆ ಒಳಪಟ್ಟಿದೆ.  ಇದರ ಸುತ್ತಮುತ್ತ ಹತ್ತಿ ಹಾಗೂ ಶೇಂಗಾ ಹೇರಳವಾಗಿ ಬೆಳೆಯುವುದರಿಂದ ಇಲ್ಲಿ ಹತ್ತಿ  ಅರೆಯುವ ಜಿನ್ನುಗಳು ಮತ್ತು ಸೇಂಗಾ, ಗೋದಿ, ಮೆಣಸಿನಕಾಯಿ ಹಾಗೂ ಬಟ್ಟೆ ವ್ಯಾಪಾರಕ್ಕೆ ಪ್ರಸಿದ್ಧ.  ರಾಣಿಬೆನ್ನೂರಿನ ದಕ್ಷಿಣಕ್ಕೆ ಇರುವ ದಾವಣಗೆರೆ ಅತ್ಯಂತ ಸಮೀಪವಾಗಿದ್ದ ಆ ನಗರದೊಂದಿಗೆ ವ್ಯಾಪಾರ ಸಂಪರ್ಕ ಹೆಚ್ಚು.  ಈ ಪಟ್ಟಣದಲ್ಲಿ ಕಲಾ ಮತ್ತು ವಿe್ಞÁನ  ಕಾಲೇಜು, ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳು ಹಾಗೂ ಸಾರ್ವಜನಿಕ ವಾಚನಾಲಯಗಳು ಇವೆ.  ಅಂಚೆ, ತಂತಿ, ವಿದ್ಯುತ್ತು ಮತ್ತು ದೂರವಾಣಿ ಸೌಲಭ್ಯಗಳಿವೆ.  ರಕ್ಷಿತ ಕುಡಿಯುವ ನೀರಿನ ಸರಬರಾಜಿದೆ.  ಪಶುವೈದ್ಯಾಲಯ, ಸಾರ್ವಜನಿಕ ಆಸ್ಪತ್ರೆ ಮುಂತಾದವುಗಳಿವೆ.
ಸಿದ್ಧೇಶ್ವರ ದೇವಾಲಯ ಈ ಊರಿನ ಪ್ರಾಚೀನ ಹಾಗೂ ಮುಖ್ಯ ದೇವಾಲಯ.  ಈ ಊರಿನಲ್ಲಿರುವ ಹಜರತ್ ಜಮಾಲ್ ಷಾ ವಲೋ ಎಂಬ ಸಂತರ ಸಮಾಧಿ ಪವಿತ್ರ ಕ್ಷೇತ್ರವೆಂದು ಪ್ರಸಿದ್ಧ. ಮೊಹರಂ ಹಬ್ಬದ ಕಾಲದಲ್ಲಿ ಇಲ್ಲಿ ಜಾತ್ರೆ ಸೇರುತ್ತದೆ.